ಚಿತ್ರಾಲಂಕೃತ ಹಸ್ತಪ್ರತಿಗಳು-
ವಿವಿಧ ರೀತಿಯ ಚಿತ್ರಗಳಿಂದ ಅಲಂಕೃತವಾದ ಹಸ್ತಪ್ರತಿಗಳಿಗೆ ಈ ಹೆಸರಿದೆ (ಇಲಸ್ಟ್ರೇಟೆಡ್ ಮ್ಯಾನ್ಯುsಸ್ಕ್ರಿಪ್ಟ್). ಅಕ್ಷರಗಳಿಗೆ ಸಾಲಂಕೃತವಾಗಿ ಮಾಡುವುದು, ಪುಟಪುಟಕ್ಕೂ ಸುಂದರ ಚೌಕಟ್ಟನ್ನು ಕಟ್ಟುವುದು, ಮುಖಪುಟವನ್ನು ಮೇಲು ಹೊದಿಕೆಯ ರಟ್ಟನ್ನು ವರ್ಣಚಿತ್ರಗಳಿಂದ ಅಲಂಕರಿಸುವುದು, ವಿಷಯಕ್ಕೆ ಸಂಬಂಧಿಸಿದಂತೆ ಗ್ರಂಥದ ಒಳಗಡೆ ರೇಖಾಚಿತ್ರಗಳನ್ನು ಒದಗಿಸುವುದು-ಹೀಗೆ ಹಸ್ತಪ್ರತಿ ಚಿತ್ರಾಲಂಕರಣಕಲೆ ಅನೇಕ ಬಗೆಯಲ್ಲಿ ಪ್ರಕಾಶಗೊಂಡು ಲಿಪಿಕಾರರ ಕಲಾಕೌಶಲಕ್ಕೆ ನಿದರ್ಶನವಾಗಿದೆ.
ಚಿತ್ರಾಲಂಕೃತ ಹಸ್ತಪ್ರತಿಗಳು ಯಾವುದೇ ದೇಶಕ್ಕೆ, ವಿಷಯಕ್ಕೆ ಸೀಮಿತವಾಗಿಲ್ಲ. ದೊರೆಯುವ ಚಿತ್ರಗಳು ಮಾತ್ರ ಆಯಾ ದೇಶದ, ಆಯಾ ಕಲೆಯ ವೈಶಿಷ್ಟ್ಯವನ್ನು ಪಡೆದಿರುತ್ತವೆ. ಇದುವರೆಗೆ ತಿಳಿದುಬಂದಿರುವಂತೆ ಯೂರೋಪಿನಲ್ಲಿ ಬಿeóÁಂಟಿನ್ ಮತ್ತು ರೋಮನ್ ಕಲೆಗಳೇ ಪುರಾತನವಾದುವು. ದೊರೆಯುವ ಚಿತ್ರಾಲಂಕೃತ ಹಸ್ತಪ್ರತಿಗಳಲ್ಲಿ ಪುರಾತನವಾದುವೆಂದರೆ ಈಜಿಪ್ಟಿನ ಪಪೈರಸ್ ಸುರುಳಿಗಳು. ಇವುಗಳ ಕಾಲ ಕ್ರಿ.ಪೂ. 7,000 ವರ್ಷಗಳು. ದಿ ಬುಕ್ ಆಫ್ ದಿ ಡೆಡ್ ಎಂಬ ಗ್ರಂಥದ ಬೇರೆ ಬೇರೆ ಪ್ರತಿಗಳು ಹಲವು ಸಮಾಧಿಗಳಲ್ಲಿ ಕಂಡುಬಂದಿವೆ. ಇವುಗಳೆಲ್ಲವೂ ಪಪೈರಸ್ ಸುರುಳಿಗಳೇ. ಇವುಗಳಲ್ಲಿ ರೇಖಾಚಿತ್ರಗಳನ್ನೂ ಜಲವರ್ಣ ಚಿತ್ರಗಳನ್ನೂ ಕಾಣಬಹುದಾಗಿದೆ. ಇದೇ ಮಾದರಿಯ ಒಂದು ಹಸ್ತಪ್ರತಿ ಬ್ರಿಟಿಷ್ ವಸ್ತುಸಂಗ್ರಹಾಲಯದಲ್ಲಿದೆ. ಗ್ರೀಸಿನಲ್ಲಿ ಕ್ರಿ. ಶ. 4ನೆಯ ಶತಮಾನಕ್ಕೆ ಪೂರ್ವದ ಇಂಥ ಯಾವ ಪ್ರತಿಗಳೂ ದೊರೆಯದಿದ್ದರು ಕ್ರಿ.ಶ. 400 ರ ರೋಮನ್ ಪ್ರತಿ ಹೋಮರನ ಇಲಿಯಡ್ ಕಾವ್ಯ ಅಮ್ಟ್ರೋಸಿಯಾನ ಗ್ರಂಥಾಲಯದಲ್ಲಿದೆ. ಇದರಲ್ಲಿ 58 ಉಜ್ಜ್ವಲಾಲಂಕೃತ ಚಿತ್ರಗಳಿವೆ. ಇನ್ನೊಂದು ಇದೇ ಕಾಲದ ರೋಮನ್ ಪ್ರತಿಯೆಂದರೆ ವರ್ಜಿಲ್ ಆಫ್ ದಿ ವ್ಯಾಟಿಕನ್.
 
	ಇದೇ ರೀತಿ ಭಾರತದಲ್ಲಿ ಓಲೆ ಮತ್ತು ಕಾಗದದ ಮೇಲೆ ಬರೆದ ಚಿತ್ರಾಲಂಕೃತ ಹಸ್ತಪ್ರತಿಗಳು ದೊರೆಯುತ್ತವೆ. ಈಗ ತಿಳಿದು ಬಂದಿರುವಂತೆ ಓಲೆಯ ಅತ್ಯಂತ ಹಳೆಯ ಚಿತ್ರಾಲಂಕೃತ ಪ್ರತಿಯೆಂದರೆ, 1962ರಲ್ಲಿ ನ್ಯೂಯಾರ್ಕ್ ನಗರದಲ್ಲಿ ಪ್ರದರ್ಶಿತವಾದ ಸಂಸ್ಕ್ರತ ಗ್ರಂಥ. ಇದು ಭೌದ್ಧರ ಪ್ರಾರ್ಥನಾಗೀತೆಗಳನ್ನೊಳಗೊಂಡಿದೆ. ಇದರಲ್ಲಿರುವ ಚಿತ್ರಗಳು ಅಜಂತ ಕಲೆಯನ್ನನುಸರಿಸಿವೆಯೆಂದು ಹೇಳುತ್ತಾರೆ. ಈಗ ದೊರೆಯುವ ಮತ್ತೊಂದು ಪ್ರತಿಯೆಂದರೆ ಧವಳ ಮಹಾಗ್ರಂಥ. ಇದರ ಕಾಲ ಸುಮಾರು 11ನೆಯ ಶತಮಾನ. ಇದು ಅರ್ಧಮಾಗಧಿ ಭಾಷೆಯಲ್ಲಿ ಕನ್ನಡ ಶಾಸನ ಲಿಪಿಯಲ್ಲಿ ಬರೆಯಲಾಗಿದೆ. ಜೈನತತ್ತ್ವ ನಿರೂಪಣೆಯನ್ನು ಹೊಂದಿರುವ ಈ ಹಸ್ತಪ್ರತಿ ಕರ್ನಾಟಕ ರಾಜ್ಯದ ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದರೆ ಜೈನಮಂದಿರದಲ್ಲಿ ಸಿದ್ಧಾಂತದರ್ಶನಕ್ಕೆಂದು ಮೀಸಲಾಗಿದೆ. ಇದರಲ್ಲಿ ಅತ್ಯುತ್ತಮವಾದ ವರ್ಣರಂಜಿತ ಚಿತ್ರಗಳಿವೆ. ಇಲ್ಲಿಯೆ ಇರುವ ಮತ್ತೊಂದು ರೇಖಾಚಿತ್ರಗಳನ್ನೊಳಗೊಂಡ ಹಸ್ತಪ್ರತಿಯೆಂದರೆ ನೇಮಿಚಂದ್ರನ ನೇಮಿನಾಥಪುರಾಣ. ಇಂಥ ಹಲವಾರು ಓಲೆಗ್ರಂಥಗಳಲ್ಲಿ ಚಿತ್ರಗಳನ್ನು ಕಂಡರಸಿದ್ದಾರೆ. ಹಲವು ಹಸ್ತಪ್ರತಿಗಳು ಮೈಸೂರಿನ ಕನ್ನಡ ಅಧ್ಯಯನ ಸಂಸ್ಥೆ ಮತ್ತು ಪ್ರಾಚ್ಯ ವಿದ್ಯಾಸಂಶೋಧನಾಲಯದಲ್ಲಿವೆ

14ನೆಯ ಶತಮಾನದ ಕೊನೆಯಲ್ಲಿ ಕಾಗದ ಬಳಕಗೆ ಬಂದು ಓಲೆ ಮತ್ತು ಭೂರ್ಜಪತ್ರಗಳ ಸ್ಥಾನವನ್ನು ಆಕ್ರಮಿಸಿತು. ಕಾಗದ ಬಳಕೆಗೆ ಬಂದಮೇಲೆ ತಯಾರಾದ ಹಸ್ತಪ್ರತಿಗಳಲ್ಲಿ 1550 ರಲ್ಲಿ ಬರೆದ, ಜೈನ ನಿಯಮಾವಳಿಗಳನ್ನೊಳಗೊಂಡ ಚಿತ್ರಾಲಂಕೃತ ಹಸ್ತಪ್ರತಿಯೆಂದರೆ ಕಲ್ಪಸೂತ್ರ. ಇದರಲ್ಲಿನ ಚಿತ್ರಗಳು ಪಶ್ಚಿಮ ದೇಶದ ರೇಖಾವಿನ್ಯಾಸಗಳನ್ನೊಳಗೊಂಡ ಭಾರತ ಚಿತ್ರಗಳು.

 	16ನೆಯ ಶತಮಾನದಲ್ಲಿ ಬಹುತೇಕ ಹಸ್ತಪ್ರತಿಗಳು ಚಿತ್ರಗಳಿಂದ ಅಲಂಕೃತವಾದುವಾಗಿವೆ. ಮೊಗಲ್ ಚಕ್ರವರ್ತಿ ಅಕ್ಬರ್ ಭಾರತದ ಎಲ್ಲ ಭಾಗಗಳಿಂದ ಚಿತ್ರಕಾರರನ್ನು ಕರೆಸಿದ. ಇವರಿಂದ ಹಲವಾರು ಹಸ್ತಪ್ರತಿಗಳು ಉತ್ತಮ ಚಿತ್ರಗಳಿಂದ ಅಲಂಕೃತವಾದುವು. ಈ ಎಲ್ಲ ಚಿತ್ರಗಳಲ್ಲಿ ಮೊಗಲರ ಕಲಾವಂತಿಕೆಯನ್ನು ನೋಡಬಹುದಾಗಿದೆ. ಇದಕ್ಕೆ ಉದಾಹರಣೆಯಾಗಿ 36 ಚಿತ್ರಗಳನ್ನೊಳಗೊಂಡ 1595ರಲ್ಲಿ ಅಕ್ಬರನಿಗಾಗಿ ರಚಿತವಾದ ಅಬ್ದುಲ್ ರಹೀಮ್ ಗ್ರಂಥವನ್ನು ನೋಡಬಹುದು. ಇದು ಬಾಬರನ ಜೀವನ ಘಟನೆಗಳನ್ನೊಳಗೊಂಡ ಪಾರಸಿ ಹಸ್ತಪ್ರತಿ. 16ನೆಯ ಶತಮಾನದ ಮತ್ತೊಂದು ಚಿತ್ರಾಲಂಕೃತ ಹಸ್ತಪ್ರತಿಯೆಂದರೆ ಎನ್‍ಸೈಕ್ಲೊಪೀಡಿಯ ಆಫ್ ಸೈನ್ಸಸ್. ಇದರಲ್ಲಿ ಮರಗಿಡಗಳು, ಕಲ್ಲುಗಳು ಮತ್ತು ಪ್ರಾಣಿಗಳ ಚಿತ್ರಗಳು ಅತ್ಯಂತ ಸುಂದರವಾಗಿ ಚಿತ್ರಿತವಾಗಿವೆ. 1567ರಲ್ಲಿ ಪ್ರಸಿದ್ಧ ಕನ್ನಡಲಿಪಿಕಾರ ಪಾಯಣ್ಣನಿಂದ ರಚಿಸಲಾದ ಎರಡನೆಯ ನಾಗವರ್ಮನ ವರ್ಧಮಾನ ಪುರಾಣದ ಕಾಗದದ ಪ್ರತಿಯಲ್ಲಿ ಕೆಲವು ವರ್ಣರಂಜಿತ ಚಿತ್ರಗಳನ್ನು ಕಾಣಬಹುದು.
ಮುಮ್ಮಡಿ ಕೃಷ್ಣರಾಜರ ಕಾಲದಲ್ಲಿ, ಎಂದರೆ 1850ರಲ್ಲಿ, ಇಂಥ ಹಸ್ತಪ್ರತಿಗಳು ಮೈಸೂರು ನಗರದಲ್ಲಿ ರಚಿತವಾಗಿವೆ. ಇವುಗಳಲ್ಲಿ ಶ್ರೀ ತತ್ತ್ವನಿಧಿ ಬಹು ಪ್ರಸಿದ್ಧಿವಾದುದು. ಇದರಲ್ಲು ಸುಮಾರು 40000 ವರ್ಣ ಚಿತ್ರಗಳೂ ಹಲವಾರು ರೇಖಾಚಿತ್ರಗಳೂ ಇವೆ. ಇಲ್ಲಿಕೊಟ್ಟಿರುವ ನವನಿಧಿಗಳ ನಿರೂಪಣೆಗೆ ಅನುಗುಣವಾಗಿ ಚಿತ್ರಗಳನ್ನು ಅಳವಡಿಸಲಾಗಿದೆ. ಹಾಗೆಯೇ ಚದುರಂಗಚಕ್ರವನ್ನೂ ನೋಡಬಹುದು. ಇದೂ ವರ್ಣಚಿತ್ರಗಳಿಂದ ಕೂಡಿದೆ. ಇದರಲ್ಲಿ ವಿವಿಧ ರೀತಿಯ ಆಟಗಳಿವೆ. ಹಾಗೆಯೇ ಅಶ್ವವೈದ್ಯಗ್ರಂಥವೂ ಚಿತ್ರಸಹಿತವಾಗಿದೆ.

ವೀರಶೈವಾಮೃತ ಪುರಾಣ ಓಲೆ ಗ್ರಂಥದಲ್ಲಿ ಹಲವಾರು ರೇಖಾಚಿತ್ರಗಳನ್ನುಬಿಡಿಸಲಾಗಿದೆ. ಭೀಮಕವಿಯ ಬಸವಪುರಾಣದ ಕಾಗದದ ಹಸ್ತ್ರಪ್ರತಿಯೊಂದರಲ್ಲಿ ಪ್ರತಿ ಪುಟವನ್ನೂ ವಿವಿಧ ರೀತಿಯ ಬಣ್ಣದ ಚೌಕಟ್ಟುಗಳಿಂದ ಅಲಂಕರಿಸಲಾಗಿದೆ. ಇದರಲ್ಲಿ ಕಂಡು ಬರುವ ವಿನ್ಯಾಸಗಳು ತುಂಬಾ ಆಕರ್ಷಕವಾಗಿವೆ. ಈ ಚೌಕಟ್ಟುಗಳೇ ಅಲ್ಲದೆ ಈ ಹಸ್ತಪ್ರತಿಯ ರಕ್ಷಣೆಗಾಗಿ ಉಪಯೋಗಿಸಿರುವ ಹೊರಗಣ ಎರಡು ಹಲಗೆಗಳ ಮೇಲೆ ಮೂಡಿಸಿರುವ ವರ್ಣರಂಜಿತ ಚಿತ್ರಗಳೂ ಬಹಳ ಸೊಗಸಾಗಿವೆ.
ಹೀಗೆ ಚಿತ್ರಗಳನ್ನು ಬಿಡಿಸಿರುವುದಲ್ಲದೆ, ಅಕ್ಷರಗಳನ್ನು ಬರೆಯುವಾಗಲೂ ಹಲವಾರು ಚಿತ್ರವಿಚಿತ್ರ ರೀತಿಯಿಂದ ಬರೆದ ಲಿಪಿಕಾರರು ತಮ್ಮ ಕಲಾಪ್ರೌಢಿಮೆಯನ್ನು ಪ್ರದರ್ಶಿಸಿರುವುದನ್ನು ಕಾಣಬಹುದು. ಇದಕ್ಕೆ ಧವಳ ಗ್ರಂಥದಲ್ಲಿ ಹಾಕಿರುವ 4ನೆಯ ಪತ್ರಸಂಖ್ಯೆಯನ್ನು ನೋಡಬಹುದು. ಮೈಸೂರು ವಿಶ್ವವಿದ್ಯಾನಿಲಯದ ಕನ್ನಡ ಅಧ್ಯಯನ ಸಂಸ್ಥೆಯಲ್ಲಿರುವ ರಾಜನೀತಿ ಪದ್ಯಗಳಿರುವ ಪತ್ರಗಳಲ್ಲಿ ಬರೆದಿರುವ ವಿವಿಧ ರೀತಿಯ ಸಾಲು ಜೋಡಿಗಳನ್ನು ನೋಡಬಹುದು. ವಿವಿಧ ದಿಕ್ಕುಗಳಿಂದ ಓದಬಹುದಾದ ಈ ಬರಹ ಚಮತ್ಕಾರಯುಕ್ತವಾಗಿದೆ.

	ಹಾಗೇಯೇ ಸೂಕ್ಷ್ಮ ಲಿಪಿಗಳಿಗೆ ಪ್ರಸಿದ್ಧವಾಗಿರುವ ಮೈಸೂರಿನ ಪ್ರಾಚ್ಯ ವಿದ್ಯಾ ಸಂಶೋಧನಾಲಯದಲ್ಲಿರುವ ದೇವೀ ಸ್ತೋತ್ರ ಮತ್ತು ಸುಂದರ ಕಾಂಡ ಓಲೆಗ್ರಂಥಗಳನ್ನು ನೋಡಬಹುದು. ದೇವೀಸ್ತೋತ್ರ ಹಸ್ರಪ್ರತಿಯ 21/2" ಉದ್ದದಲ್ಲಿ 25 ಅಕ್ಷರಗಳನ್ನು 1 1/2" ಅಗಲದಲ್ಲಿ 23 ಪಂಕ್ತಿಗಳನ್ನೂ ಕಾಣಬಹುದಾಗಿದೆ. ಇದು ಸಂಸ್ಕøತ ಗ್ರಂಥವಾಗಿದ್ದು ತೆಲುಗು ಲಿಪಿಯಲ್ಲಿದೆ. ಸುಂದರ ಕಾಂಡ ಗ್ರಂಥಾಕ್ಷರದಲ್ಲಿದೆ. 31/2" x 11/2" ಬರೆವಣಿಗೆಯ ಅಳತೆಯ ಭಾಗದಲ್ಲಿ 47 ಅಕ್ಷರಗಳೂ 21-25 ಪಂಕ್ತಿಗಳೂ ಇವೆ. ಇವುಗಳ ಜೊತೆಗೆ ಇದೇ ಮಾದರಿಯಲ್ಲಿ ಬರೆದಿರುವ, ಹೆಸರು ತಿಳಿಯದ ಯಾವುದೋ ಗ್ರಂಥದ ಒಂದು ಪತ್ರಮಾತ್ರ ದೊರೆತಿದೆ. ಅದರ ಅಳತೆ 18" x 11/2 ". ಅದರ ಪ್ರತಿ ಪಕ್ಕದಲ್ಲಿ 22 ಪಂಕ್ತಿಗಳೂ, ಪ್ರತಿ ಪಂಕ್ತಿಯಲ್ಲಿಯೂ 420 ಅಕ್ಷರಗಳೂ ಇವೆ ಎಂದಾಗ ಆಶ್ಚರ್ಯವಾಗುತ್ತದೆ.

	ಹೀಗೆ ವಿವಿಧ ರೀತಿಯ ರೇಖಾಚಿತ್ರ ವರ್ಣ ಚಿತ್ರಗಳಿಂದಲಂಕೃತವಾದ ವೈವಿಧ್ಯಮಯ ಲಿಪಿಗಳನ್ನು ಹೊತ್ತ ಹಲವಾರು ಹಸ್ತಪ್ರತಿಗಳು ದೇಶ ವಿದೇಶಗಳಲ್ಲಿ ದೊರೆಯುತ್ತವೆ.
6ನೆಯ ಶತಮಾನದ ಚಿತ್ರಾಲಂಕೃತ ಹಸ್ತಪ್ರತಿಯೆಂದರೆ ಡಯಾಸ್ಕೋರಿಡಿಸ್ ಎಂಬ ವೈದ್ಯ ಗ್ರಂಥವಾಗಿದೆ. ಇದು ವಿಯನ್ನದಲ್ಲಿದೆ. ಇದು ಪೂರ್ವ ಕ್ರಿಶ್ಚನ್ ಕಲೆಗೆ ಸೇರಿದುದಾಗಿದ್ದು ಮೂಲಪ್ರತಿಯೆ ಉಳಿದು ಬಂದಿದೆ. ಇಂಥ ಹಸ್ತಪ್ರತಿಗಳು ಇನ್ನೂ ಹಲವಿದ್ದರೂ ಇವುಗಳು ಮೂಲದ ಮರುಪ್ರತಿಗಳಾಗಿದ್ದು ಮಧ್ಯ ಕಾಲಕ್ಕೆ ಸೇರಿದುವಾಗಿವೆ. ಇವುಗಳಲ್ಲಿ ಕಂಡು ಬರುವ ಚಿತ್ರಗಳು ಹೆಲೆನಿಸ್ಟಿಕ್ ಕಲೆಯಿಂದ ಪ್ರೇರಿತವಾದವು.

	ಬಿeóÁಂಟಿನ್ ಕಲಾಚಿತ್ರಗಳ ಬೆಳವಣಿಗೆ ಹೇಗೆ ಪ್ರಾರಂಭವಾಯಿತೆಂಬುದು ಖಚಿತವಾಗಿ ತಿಳಿದುಬಂದಿಲ್ಲ. ಇದರ ಬಗ್ಗೆ ಭಿನ್ನಾಭಿಪ್ರಾಯಗಳಿವೆ. ಬಿeóÁಂಟಿನ್ ರೆನೆಸಾನ್ಸ್ ಕೃತಿಗಳೆಂದು ಪ್ರಸಿದ್ದವಿರುವ ಹಸ್ತಪ್ರತಿಗಳು ಪೂರ್ವ ಕ್ರಿಶ್ಚಿಯನ್ ಗ್ರಂಥಗಳ ಮರುಪ್ರತಿಗಳಾಗಿದ್ದು. ಕೆಲವು ಅದನ್ನು ಅನುಸರಿಸಿ ರಚಿಸಿದ ಸ್ವತಂತ್ರ ಕೃತಿಗಳಾಗಿವೆ.

	ಇದಲ್ಲದೆ ಕೆಲವು ಹಸ್ತಪ್ರತಿಗಳು ಪಶ್ಚಿಮ ದೇಶಗಳ ಮೂಲದಿಂದ ಬಂದವುಗಳಾಗಿವೆ. ಇವುಗಳಲ್ಲಿ ಅತ್ಯಂತ ಮುಖ್ಯವಾದುವೆಂದರೆ ಕೇಂಬ್ರಿಜ್‍ನ ಕಾರ್ಪಸ್ ಕ್ರಿಸ್ಟಿಯಲ್ಲಿರುವ ಸೇಂಟ್ ಆಗಸ್ಟಿನ್ಸ್ ಗಾಸ್ಟೆಲ್ಸ್ ಎಂಬುದಾಗಿದೆ. ಬಿಬ್ಲಿಯೋತಿಕ್ ನ್ಯಾಷನಲ್‍ನಲ್ಲಿರುವ ಆಷ್‍ಬರ್ನ್ ಹ್ಯಾಮ್ ಪೆಂಟಾಟೆಂಚ್ ಎಂಬುದು ಬೇರೆ ರೀತಿಯಾದಾಗಿದ್ದು ಅದರಲ್ಲಿನ 19 ಸೂಕ್ಷ್ಮ ಚಿತ್ರಗಳು ಪ್ರಾಚೀನ ಶೈಲಿಯಲ್ಲಿವೆ.

	ಪಶ್ಚಿಮ ಯೂರೋಪಿನ 7 ಮತ್ತು 8ನೆಯ ಶತಮಾನಗಳ ಕೆಲವು ಹಸ್ತಪ್ರತಿಗಳು ಚಿತ್ರಾಲಂಕರಣಕ್ಕೆ ಪ್ರಸಿದ್ಧವಿದೆ. ಇವುಗಳಲ್ಲಿ 675 ರ ಡರೊ ಎಂಬುದು 7 ನೆಯ ಶತಮಾನದ ಐರಿಷ್ ಮತ್ತು ಸ್ಯಾಕ್ಸನ್ ಲೋಹಕಲೆಯನ್ನು ಹೋಲುವುದಾಗಿದೆ. ಲಿಂಡಿಸ್ ಷಾರ್ನ್ ಗಾಸ್ಪೆಲ್ಸ್ ಎಂಬುದು 258 ಪತ್ರಗಳಿಂದ ಕೂಡಿದ್ದು 7 ನೆಯ ಶತಮಾನದ ಕೊನೆಯದಾಗಿದ್ದು ಇದುವರೆಗೂ ಉಳಿದುಬಂದಿದೆ. ಇದರಲ್ಲಿ ಕಂಡುಬರುವ ಸುಂದರ ಅಲಂಕೃತ ಚಿತ್ರಗಳು ಪ್ರಸಿದ್ಧ ಈಡ್ ಫ್ರಿತ್ ಎಂಬ ಕಲೆಗಾರನಾಗಿವೆ. ಈತ ಬ್ರಿಟಿಷ್ ದ್ವೀಪಗಳ ಕಲಾ ಇತಿಹಾಸದಲ್ಲಿ ಕಂಡುಬರುವ ಮೊದಲ ಕಲೆಗಾರನಾಗಿದ್ದಾನೆ. ಕೆಲ್ಸ್ ಎಂಬುದು ಮತ್ತೊಂದು ವೆಲ್ಲಮ್ ವಸ್ತುವಿನದಾಗಿದ್ದು ಉಳಿದವುಗಳಂತೆಯೇ ಕ್ರೈಸ್ತ ಧಾರ್ಮಿಕ ಗ್ರಂಥವಾಗಿದೆ. ಇದರಲ್ಲಿ ಕಂಡುಬರುವ ಕಲೆ ಮೇಲೆ ಹೇಳಿದ ಎರಡು ಗ್ರಂಥಗಳಿಂದಲೇ ಪ್ರೇರಿತವಾದುದಾದರೂ ಅಲ್ಲಿಗಿಂತ ಹೆಚ್ಚು ಸೂಕ್ಷ್ಮವಾಗಿರುವುದನ್ನು ಇಲ್ಲಿ ಕಾಣಬಹುದಾಗಿದೆ. ಹಾಳೆಗಳು ಉಜ್ವಲಾಲಂಕಾರದಿಂದ ಕೂಡಿದ್ದು ವರ್ಣರಂಜಿತವಾಗಿವೆ.

	ಹೀಗೆಯೇ ಕ್ಯಾರೋಲಿಂಗಿಯನ್ ಕಾಲದ ಕಲಾವಸ್ತುಗಳಲ್ಲಿ ಹಸ್ತಪ್ರತಿಗಳು ಪ್ರಸಿದ್ಧವಾದುವಾಗಿವೆ. 9 ನೆಯ ಶತಮಾನದ ಮಧ್ಯಭಾಗದ ವಿವಿಯನ್ ಬೈಬಲ್ ಎಂಬುದು ಟೂರ್ಸ್‍ಕಲಾ ಶಾಲೆಗೆ ಸೇರಿದುದಾಗಿದ್ದು ಲಿಪಿ ಹಾಗೂ ವಿಷಯ ನಿರೂಪಣಾ ಚಿತ್ರಗಳಿಗೆ ಪ್ರಸಿದ್ಧವಾಗಿದೆ.

ಲೀಬನದ ಬೀಟಸ್ ಎಂಬ ಸ್ಪೇನಿನ ಸಂನ್ಯಾಸಿಯಿಂದ 770 ರಲ್ಲಿ ರಚಿತವಾದ ಕಾಮೆಂಟರಿ ಆಫ್ ದಿ ಆಪೋಕಲಿಪ್ಸ್ ಎಂಬುದರ ಮರು ಹಸ್ತಪ್ರತಿಗಳು ವರ್ಣ ರಂಜಿತ ಚಿತ್ರಗಳಿಗೆ ಹೆಸರುವಾಸಿಯಾಗಿವೆ. ಮೂಲ ಹಸ್ತಪ್ರತಿಯ ಆನಂತರ ಮೂರು ಶತಮಾನಗಳವರೆಗೆ ಈ ಹಸ್ತಪ್ರತಿಯ ನಕಲುಗಳು ತಯಾರಾಗಿವೆ. ಇವುಗಳ ಪ್ರಭಾವ ಯೂರೋಪು ಖಂಡದ ಎಲ್ಲ ಕಲಾ ಸಂಪ್ರದಾಯಗಳ ಮೇಲೂ ಆಗಿರುವುದು ಕಂಡುಬರುತ್ತದೆ. ಇವುಗಳಲ್ಲಿ ಉಳಿದುಬಂದಿರುವ 24 ಹಸ್ತಪ್ರತಿಗಳ ಕಾಲ 926 ರಷ್ಟು ಹಿಂದಕ್ಕೆ ಹೋಗುತ್ತದೆ. 

13ನೆಯ ಶತಮಾನದ ಧಾರ್ಮಿಕ ಗ್ರಂಥಗಳು ವೈಯಕ್ತಿಕ ಉಪಯೋಗಕ್ಕಾಗಿ ರಚಿತವಾಗಿದ್ದು ಸುಂದರವಾದ ಸೂಕ್ಷ್ಮ ಚಿತ್ರಗಳಿಂದ ಕೂಡಿದುವಾಗಿವೆ.

15ನೆಯ ಶತಮಾನದಲ್ಲಿ ಅಚ್ಚಿನ ಸಾಧನ ಬಂದು, ಅದರ ಮೂಲಕ ಚಿತ್ರಗಳನ್ನು ಹಾಕುವುದು ರೂಢಿಗೆ ಬಂದಮೇಲೆ ಹಸ್ತಪ್ರತಿಗಳ ಚಿತ್ರಗೆಲಸ ಕಡಿಮೆಯಾಗುತ್ತ ಬಂತು. 					(ಎಸ್.ಬಿ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ